ನಿಯಾಂಡರ್‍ತಾಲ್ ಮಾನವ-
	ಮಾನವನ ವಿಕಾಸದ ಹಾದಿಯಲ್ಲಿ ಪಿತಕ್ಯಾಂತ್ರಪಸ್ (ಹೋಮೊ) ಎರಕ್ಟಸ್ ಮಾನವನಿಗಿಂತ ಬಹು ಮುಂದುವರಿದ ಆದರೆ ನವೀನ ಮಾನವನಿಗಿಂತ ಬಹು ಆದಿಮ ಬುಡಕಟ್ಟಿನ ಮಾನವನ ಗುಂಪು. ನಿಯಾಂಡರ್‍ತಾಲ್ ಮಾನವ ಪ್ಲೀಸ್ಟೋಸೀನ್ ಕಾಲದ ಉತ್ತರ ಭಾಗದಲ್ಲಿ ಕೊನೆಯ ಹಿಮಯುಗ ಪ್ರಾರಂಭವಾಗುವ ಮುನ್ನ ಯೂರೇಷ್ಯ ಮತ್ತು ಉತ್ತರ ಆಫ್ರಿಕಾದಲ್ಲಿ ಕಾಣಿಸಿಕೊಂಡು 50,000 ವರ್ಷಗಳ ಹಿಂದೆ ಗತವಂಶಿಯಾದ. ಈತನ ಪಳೆಯುಳಿಕೆಗಳು 1856ರಲ್ಲಿ ಮೊದಲ ಬಾರಿಗೆ ಜರ್ಮನಿಯ ಡಸೆಲ್‍ಡಾರ್ಫ್ ಪಟ್ಟಣದ ಹತ್ತಿರ ಇರುವ ನಿಯಾಂಡರ್ ಕಣಿವೆಯಲ್ಲಿ ದೊರಕಿದವು. ಆದ್ದರಿಂದ ಈತನಿಗೆ ನಿಯಾಂಡರ್‍ತಾಲ್ ಮಾನವ ಎಂಬ ಹೆಸರು ಬಂತು. ಈತ ಸ್ವಲ್ಪ ಗಿಡ್ಡಾದ, ಬಲಿಷ್ಠ ದೇಹದ ಮಾನವ. ತಲೆಬುರುಡೆ ಬಹಳ ಮಂದವಾದ ಮೂಳೆಗಳಿಂದ ರಚಿತವಾಗಿತ್ತು. ಪಿತಿಕ್ಯಾಂತ್ರಪಸ್ ಮಾನವನ ಹಾಗೆ ಬಲವಾದ ಹುಬ್ಬಿನ ಏಣುಗಳು, ಮುಂಚಾಚಿದ ದವಡೆಗಳು, ಸ್ವಲ್ಪವೇ ಇರುವ ಗಲ್ಲ ಮತ್ತು ಇಳಿಜಾರಾದ ಹಣೆಯಿದ್ದವು. ಆದರೆ ಈತನ ಮೆದುಳು ಚೆನ್ನಾಗಿ ಬೆಳೆದಿತ್ತು. ಕಪಾಲದ ಪಾತ್ರ ಸುಮಾರು 1450  ಐ.ಅ. ಇತ್ತು. ಇದರಿಂದ ಈತ ಬಹುಮಟ್ಟಿಗೆ ಬುದ್ದಿವಂತನಾಗಿದ್ದ ಎಂದು ತಿಳಿಯುತ್ತದೆ. ಈತ ಉಪಯೋಗಿಸುತ್ತಿದ್ದ ಚೂಪಾದ ಮತ್ತು ಹರಿತವಾದ ಆಯುಧಗಳ ಆಧಾರದ ಮೇಲೆ ಈತ ಒಳ್ಳೆಯ ಬೇಟೆಗಾರನಾಗಿದ್ದ ಎನ್ನಲಾಗಿದೆ. ಅಲ್ಲದೆ ಬೆಂಕಿಯನ್ನು ಉಂಟು ಮಾಡುವ ಉತ್ತಮ ಸಲಕರಣೆಗಳನ್ನು ತಯಾರಿಸುತ್ತಿದ್ದ. ಆಹಾರವನ್ನು ಬೇಯಿಸಿ ತಿನ್ನುತ್ತಿದ್ದ. ಅತಿಶೀತಕಾಲವಾದ ಅಂತ್ಯ ಹಿಮಯುಗದ ಕಡೆಯ ಭಾಗದಲ್ಲಿ ಯುರೋಪಿನ ಗುಹೆಗಳಲ್ಲಿ ವಾಸಿಸುತ್ತಿದ್ದ ನಿಯಾಂಡರ್‍ತಾಲ್ ಮಾನವ ಸತ್ತವರನ್ನು ಹೂಳುವಾಗ ಕೆಲವು ನಿಯಮಗಳನ್ನು ಪಾಲಿಸುತ್ತಿದ್ದ. ಇವು ಈತನ ಸಂಸ್ಕøತಿಯನ್ನೂ ಅಂದಿನ ಸಮಾಜಧರ್ಮದ ಮನೋಭಾವಗಳನ್ನೂ ನಿರೂಪಿಸುತ್ತವೆ.

	ನಿಯಾಂಡರ್‍ತಾಲ್ ಮಾನವನ ಅಂತ್ಯಕ್ಕೆ ಅನೇಕ ಕಾರಣಗಳನ್ನು ಕೊಡಲಾಗಿದೆ. ಪೂರ್ವ ದಿಕ್ಕಿನಿಂದ ಬಂದ ಆಧುನಿಕ ಮಾನವನಂಥ (ಹೋಮೊ ಸೇಪಿಯನ್ಸ್) ಮಾನವರು ಈತನ ಕುಲವನ್ನು ನಾಶಗೊಳಿಸರಬಹುದು. ಅಥವಾ ತನಗಿಂತ ಮುಂದುವರಿದ ಮತ್ತು ಒಳ್ಳೆಯ ಆಯುಧ ಹಾಗೂ ಹತ್ಯಾರುಗಳನ್ನು ಉಪಯೋಗಿಸುತ್ತಿದ್ದ ಮಾನವರೊಡನೆ ಈತ ಸ್ಪರ್ಧಿಸಲಾರದೇ ಅವರಿಂದ ನಾಶವಾಗಿರಬಹುದು.

	ಮೇಲೆ ತಿಳಿಸಿದ ನಿಯಾಂಡರ್‍ತಾಲ್ ಮಾನವನ ಲಕ್ಷಣಗಳು ಸಹಜವಾದ ಲಕ್ಷಣಗಳಲ್ಲ, ಆತನ ಕಾಲದವರು ಸಾಮಾನ್ಯವಾಗಿ ರಿಕೆಟ್ಸ್‍ರೋಗದಿಂದ ನರಳುತ್ತಿದ್ದುದರಿಂದ ಆ ಲಕ್ಷಣಗಳಿದ್ದುವೆಂಬ ಅಭಿಪ್ರಾಯವೂ ಉಂಟು. ನಿಯಾಂಡರ್‍ತಾಲ್ ಮಾನವ ರಿಕೆಟ್ಸ್ ರೋಗಕ್ಕೆ ತುತ್ತಾಗಲು ಆತ ಉಪಯೋಗಿಸುತ್ತಿದ್ದ ಆಹಾರದಲ್ಲಿ ವೈಟಮಿನ್ ಡಿ ಕೊರತೆಯಿತ್ತೆಂದು ಮತ್ತು ಆತ ಜೀವಿಸುತ್ತಿದ್ದ ಚಳಿಮಳೆ ಹೆಚ್ಚಾಗಿದ್ದ ಹಿಮಯುಗದಲ್ಲಿ ದೇಹಕ್ಕೆ ಈ ವೈಟಮಿನ್ ಒದಗಲು ಸಹಾಯಕವಾದ ಸೂರ್ಯರಶ್ಮಿ ಬಹುಶಃ ಹೇರಳವಾಗಿ ದೊರಕುತ್ತಿರಲಿಲ್ಲ ಎಂಬ ಎರಡು ಕಾರಣಗಳನ್ನು ಕೊಡುತ್ತಾರೆ.
(ಎನ್.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ